ವಾಟರ್ ಪೋಲೋ
	ನೀರಿನಲ್ಲಿ ಆಡುವ ಒಂದು ಬಗೆಯ ಕ್ರೀಡೆ. ಇದು ಬ್ರಿಟನ್‍ನಲ್ಲಿ ಆರಂಭಗೊಂಡಿತು(1860). ಈ ಕ್ರೀಡೆಯ ಪ್ರಥಮ ಅಂತಾರಾಷ್ಟ್ರೀಯ ಸ್ಪರ್ಧೆ ಇಂಗ್ಲೆಂಡ್ ಮತ್ತು ಸ್ಕಾಟ್ಲೆಂಡ್‍ಗಳ ನಡುವೆ ನಡೆಯಿತು (1880). ಪ್ಯಾರಿಸ್ ಒಲಿಂಪಿಕ್ಸ್‍ನಲ್ಲಿ ಈ ಆಟ ಒಲಿಂಪಿಕ್ ಕ್ರೀಡೆಗಳಲ್ಲಿ ಸೇರಿತು(1900).

	ಪ್ರತಿ ತಂಡದಲ್ಲಿ 7 ಜನ ಆಟಗಾರರಿರುತ್ತಾರೆ. ಚೆಂಡಿನ ವ್ಯಾಸ 68-71ಸೆಂಮೀ. ತೂಕ 400-450 ಗ್ರಾಂ. ಆಟಗಾರರು ಬಿಳಿ ಅಥವಾ ನೀಲಿ ಟೋಪಿ ಧರಿಸುವರು. ಗೋಲ್ ಕೀಪರ್‍ಗಳು ಕೆಂಪು ಟೋಪಿ ಧರಿಸುವರು. ಅವಧಿಗಳ ನಡುವೆ 2 ನಿಮಿಷಗಳ ವಿರಾಮವಿರುತ್ತದೆ. ಆಡುವ 7 ಜನ ಆಟಗಾರರಲ್ಲದೆ 3 ಜನ ಬದಲೀ ಆಟಗಾರರಿರುತ್ತಾರೆ. ಆಟಗಾರನಿಗೆ ಗಾಯವಾದಾಗ ಬದಲೀ ಆಟಗಾರ ಕಣಕ್ಕಿಳಿಯುತ್ತಾನೆ. 

	ಸಾಮಾನ್ಯವಾಗಿ ಈಜುಕೊಳಗಳಲ್ಲಿ ಈ ಆಟ ನಡೆಯುತ್ತದೆ. ಈ ಆಟದಲ್ಲಿ ಪುರುಷರ ಹಾಗೂ ಮಹಿಳೆಯರ ಆಟದ ವಿಧಗಳಲ್ಲಿ ವ್ಯತ್ಯಾಸವಿದೆ. ಪುರುಷರ ಅಂಕಣದ ಉದ್ದ 20 ಮೀಗಳಿಗೆ ಕಡಿಮೆ ಇರದಂತೆ 30 ಮೀ ಗಳಿಗಿಂತ ಹೆಚ್ಚಾಗಿರದಂತೆ ಇರುತ್ತದೆ. ಅಗಲ 10-20 ಮೀ. ಮಹಿಳಾ ಅಂಕಣ 25 ಮೀ ಉದ್ದ 17 ಮೀ ಅಗಲವಿರುತ್ತದೆ. ಗೋಲ್ ಸ್ಥಳ ನೀರಿನಿಂದ .9 ಮೀ (3 ಅಡಿ) ಮೇಲಿರುತ್ತದೆ, 3 ಮೀ ಅಗಲವಿರುತ್ತದೆ. ಪುರುಷರ ಆಟ 7 ನಿಮಿಷಗಳ ಅವಧಿಯ 4 ಅವಕಾಶ ಹೊಂದಿರುತ್ತದೆ. ಇದು 28 ನಿಮಿಷಗಳಿಗೆ ಮುಗಿಯಬೇಕು. ಮಹಿಳಾ ಆಟ 24 ನಿಮಿಷಗಳ ಅವಧಿಯದಾಗಿದ್ದು 6 ನಿಮಿಷಗಳ 4 ಅವಕಾಶ ಹೊಂದಿರುತ್ತದೆ. 

	ಗೋಲ್‍ಕೀಪರುಗಳನ್ನು ಬಿಟ್ಟು ಉಳಿದ ಆಟಗಾರರು ಚೆಂಡನ್ನು ಎರಡೂ ಕೈಗಳಿಂದ ಎಸೆಯುವಂತಿಲ್ಲ. ನಿಂತಿರುವಾಗ, ನಡೆಯುವಾಗ ಹಾಗೂ ತಲೆಯ ಮೇಲಿಂದ ಚೆಂಡನ್ನು ಹಿಡಿಯುವಂತಿಲ್ಲ. ಗೋಲ್ ಕಂಬಕ್ಕೆ 1 ಮೀಟರ್ ಸಮೀಪ ಹೋಗುವಂತಿಲ್ಲ. ಎದುರಾಳಿಗೆ ತೊಂದರೆ ಕೊಡದೆ-ಅಂದರೆ ಒದೆಯದೆ, ಎಳೆದಾಡದೆ, ತಳ್ಳದೆ ಚೆಂಡನ್ನು ಕಸಿದು ಕೊಂಡು ಗೋಲಿನೊಳಕ್ಕೆ ಎಸೆಯಬೇಕು. 20 ನಿಮಿಷಗಳ ಅವಧಿಯಲ್ಲಿ ಹೆಚ್ಚುಗೋಲ್‍ಗಳನ್ನು ಪಡೆದ ತಂಡ ಗೆಲ್ಲುತ್ತದೆ. 

	ಆಟಕ್ಕೆ ಒಬ್ಬ ರೆಫೆರಿ, ಇಬ್ಬರು ಗೋಲ್ ಜಡ್ಜ್‍ಗಳು, ಒಬ್ಬ ಸ್ಕೋರರ್ ಒಬ್ಬ ಟೈಮ್‍ಕೀಪರ್ ಇಬ್ಬರು ಲೈನ್ ಅಂಪೈರ್‍ಗಳು ಇರುವರು.										
	(ಡಿ.ಎನ್.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ